ಸಾಹಿತ್ಯ
ಖ್ಯಾತಕರ್ನಾಟಕ ವೃತ್ತಗಳು

ಕನ್ನಡಕಾವ್ಯವು ಸಂಸ್ಕೃತದಿಂದ ಎರವಲಾಗಿ ತೆಗೆದುಕೊಂಡಿರುವ, ಆರು ಅಕ್ಷರವೃತ್ತಗಳನ್ನು ಖ್ಯಾತ ಕರ್ನಾಟಕ ವೃತ್ತಗಳೆಂದು ಕರೆಯುತ್ತಾರೆ. ಗದ್ಯಪದ್ಯಮಿಶ್ರಿತವಾದ ಚಂಪೂ ಶೈಲಿಯಲ್ಲಿ ಕಾವ್ಯರಚನೆ ಮಾಡಿದ ಕವಿಗಳು, ಈ ವೃತ್ತಗಳನ್ನು ಬಹಳ ವ್ಯಾಪಕವಾಗಿ ಬಳಸಿದ್ದಾರೆ. ಕನ್ನಡಕಾವ್ಯದ ಇತಿಹಾಸದ ಆ ಹಂತದಲ್ಲಿ, ಈ ವೃತ್ತಗಳು ಬಹಳ ಚೆನ್ನಾಗಿ ಹೊಂದಾಣಿಕೆಯಾದವು. ಕಾವ್ಯಭಾಷೆಯಲ್ಲಿ ಸಂಸ್ಕೃತವನ್ನು ಧಾರಾಳವಾಗಿ ಬಳಸುವುದು ಆಗ ಸರ್ವೇಸಾಮಾನ್ಯವಾಗಿತ್ತು.

ಅಕ್ಷರವೃತ್ತವು ನಾಲ್ಕು ಸಾಲುಗಳ ಛಂದೋರಚನೆ. ಪ್ರತಿಯೊಂದು ಸಾಲಿನಲ್ಲಿಯೂ ಸಮಾನ ಸಂಖ್ಯೆಯ ಅಕ್ಷರಗಳಿರುತ್ತವೆ. ಅವುಗಳನ್ನು ಲಘು-ಗುರುಗಳ ಒಂದು ನಿರ್ದಿಷ್ಟ ವಿನ್ಯಾಸದಲ್ಲಿ ಜೋಡಿಸಿರಬೇಕು. ಹೀಗೆ ಮೊದಲೇ ತೀರ್ಮಾನವಾದ ಮಾದರಿಗಳನ್ನು ಅಕ್ಷರಗಣವಿನ್ಯಾಸವೆಂದು ಕರೆಯುತ್ತಾರೆ. ಪ್ರತಿಯೊಂದು ಸಾಲಿನಲ್ಲಿಯೂ ಮ, ಯ, ರ, ಸ, ತ ,ಜ, ಭ ಮತ್ತು ನ ಎಂಬ ಎಂಟು ಗಣಗಳು ಮತ್ತು ಒಂದು ಲಘು ಅಥವಾ ಒಂದು ಗುರುಗಳ ನಿರ್ದಿಷ್ಟ ಸಂಯೋಜನೆಗಳಿರುತ್ತವೆ. ಹೀಗೆ, ಪದ್ಯದ ನಾಲ್ಕೂ ಸಾಲುಗಳನ್ನೂ ಅದೇ ಮಾದರಿಯಲ್ಲಿ ಕಟ್ಟಿದ ಕೂಡಲೇ ಅದನ್ನು ಓದುವ ಬಗೆಯೂ ತೀರ್ಮಾನವಾಗುತ್ತದೆ. ಆದ್ದರಿಂದಲೇ ಪ್ರತಿಯೊಂದು ಅಕ್ಷರವೃತ್ತಕ್ಕೂ ಅದರದೇ ಆದ ಮಾಧುರ್ಯ ಮತ್ತು ಓದುವ ಬಗೆಗಳು ಇರುತ್ತವೆ. ಈ ಅನನ್ಯತೆಯು ಅವುಗಳನ್ನು ನಿರ್ದಿಷ್ಟ ಭಾವಗಳ ವಾಹಕಗಳಾಗಿ ಕೆಲಸಮಾಡಲು ಸಜ್ಜುಗೊಳಿಸುತ್ತವೆ. ಆದ್ದರಿಂದಲೇ ಖ್ಯಾತ ಕರ್ನಾಟಕ ವೃತ್ತಗಳಲ್ಲಿ ಪ್ರತಿಯೊಂದಕ್ಕೂ ಅದರದೇ ಆದ ಭಾವಪಟಲ ಮತ್ತು ಮಾಧುರ್ಯಗಳಿವೆ.

ಚಂಪಕಮಾಲಾ, ಉತ್ಪಲಮಾಲಾ, ಮತ್ತೇಭವಿಕ್ರೀಡಿತ, ಶಾರ್ದೂಲವಿಕ್ರೀಡಿತ, ಸ್ರಗ್ಧರಾ ಮತ್ತು ಮಹಾ ಸ್ರಗ್ಧರಾಗಳೇ, ಪ್ರಸಿದ್ಧವಾದ ಆರು ಖ್ಯಾತಕರ್ನಾಟಕ ವೃತ್ತಗಳು. ಅವುಗಳಿಗೆ ನಿಯತವಾದ ಅಕ್ಷರವಿನ್ಯಾಸಗಳು ಹೀಗಿವೆ:

ಚಂಪಕಮಾಲಾ:
ನ.ಜ.ಭ.ಜ.ಜ.ಜ.ರ (UUU.U-U.-UU.U-U.U-U.U-U.-U-)
ಕುಲಮ/ನಮುನ್ನ/ಮುಗ್ಗಡಿ/ಪಿರೇಂ ಗ/ಡ ನಿಮ್ಮ/ಕುಲಂಗ/ಳಾಂತು ಮಾರ್/

ಉತ್ಪಲಮಾಲಾ:
ಭ.ರ.ನ.ಭ.ಭ.ರ.ಲಘು.ಗುರು(-UU.-UU.UUU.-UU.-UU.-U-.U.-)
ಪೋದ ಭ/ವಂಗಳಂ/ ನೆನೆವಿ/ನಂ ಗಗ/ನಾಂತರ/ದಲ್ಲಿ ಸೂ/ರ್ಯ/ಯುಗ್

ಮತ್ತೇಭವಿಕ್ರೀಡಿತ:
ಸ.ಭ.ರ.ನ.ಮ.ಯ.ಲಘು.ಗುರು(UU-.-UU.-U-.UUU.- - -.U- -.U.-)
ಇದು ದೇ/ವೇಂದ್ರ ನಿ/ವಾಸಮೆ/ನ್ನ ನೆಲೆ/ಯುಂ ಶ್ರೀ ಶ್ರೀ/ಪ್ರಭಂ ಮುಂ/ದೆ/ನಿಂ/

ಶಾರ್ದೂಲವಿಕ್ರೀಡಿತ
ಮ.ಸ.ಜ.ಸ.ತ.ತ.ಗುರು (---.UU-.U-U.UU-.—U.—U.-)
ಶ್ರೀ ದೇವೇಂ/ದ್ರ ಮುನೀಂ/ದ್ರ ವಂದಿ/ತಗುಣ/ವ್ರಾತಂ ಜ/ಗತ್ಸ್ವಾಮಿ/ಸಂ/

ಸ್ರಗ್ಧರಾ:
ಮ.ರ.ಭ.ನ.ಯ.ಯ.ಯ (---.-U-.-UU.UUU.U--.U--.U--)
ಹಾರಾಂಶು/ಸ್ವಚ್ಛ ನೀ/ರಂ ಸುರ/ಯುವತಿ/ಮುಖಾಂಭೋ/ಜ ನೇತ್ರೋ/ತ್ಪಳ ಶ್ರೀ/

ಮಹಾಸ್ರಗ್ಧರಾ:
ಸ.ತ.ತ.ನ.ಸ.ರ.ರ.ಗುರು(UU-.- -U.- -U.UUU.- -U.-U-.-U-.-)
ಅಲಕಂ/ಮಂದಾರ/ಶೂನ್ಯಂ ಕ/ದಪು ಮ/ಕರಿಕಾ/ಪತ್ರ ಶೂ/ನ್ಯಂ ಲಲಾ/ಟಂ/

ಇವುಗಳಲ್ಲಿ ಪ್ರತಿಯೊಂದಕ್ಕೂ ಸೂಕ್ತವಾದ ಉದಾಹರಣೆಗಳನ್ನು ಕನ್ನಡದ ಮಹಾಕಾವ್ಯಗಳಿಂದ ಆರಿಸಿ ಕೊಡಲಾಗಿದೆ. ಇವುಗಳಲ್ಲಿಯೂ ಚಂಪಕಮಾಲೆ ಮತ್ತು ಉತ್ಪಲಮಾಲೆಗಳು ಬಹಳ ವಿಪುಲವಾಗಿಯೂ ಸ್ರಗ್ಧರಾ ಮತ್ತು ಮಹಾಸ್ರಗ್ಧರಾಗಳು ಕಡಿಮೆ ಪ್ರಮಾಣದಲ್ಲಿಯೂ ಬಳಕೆಯಾಗಿವೆ. ನಿರ್ದಿಷ್ಟ ಕವಿಗಳು ನಿರ್ದಿಷ್ಟ ವೃತ್ತಗಳ ಬಗೆಗಿನ ಒಲವು ತೋರಿಸುವಂತೆಯೂ ಭಾಸವಾಗುತ್ತದೆ. ಕೆಲವು ವಿದ್ವಾಂಸರು ಈ ವೃತ್ತಗಳಿಗೂ ಅಂಶಗಣ ಛಂದಸ್ಸಿನ ರಚನೆಗಳಿಗೂ ಸಂಬಂಧವನ್ನು ಕಲ್ಪಿಸಲು ಪ್ರಯತ್ನಸಿರುವರಾದರೂ ಯಶಸ್ವಿಯಾಗಿಲ್ಲ.

ಹಳಗನ್ನಡದಿಂದ ನಡುಗನ್ನಡಕ್ಕೆ ನಡೆದ ಪರಿವರ್ತನೆಯನ್ನು ಎದುರಿಸಿ ನಿಲ್ಲಲು ಈ ವೃತ್ತಗಳಿಗೆ ಸಾಧ್ಯವಾಗಲಿಲ್ಲ. ಹಾಗೆಯೇ ಅಕ್ಷರಗಣ ಛಂದಸ್ಸಿನ ಬದಲಾಗಿ ಮಾತ್ರಾಗಣಗಳ ಕಡೆಗೆ ಮೂಡಿದ ಒಲವೂ ಖ್ಯಾತ ಕರ್ನಾಟಕಗಳ ಇಳಿವಿಗೆ ಕಾರಣವಾಯಿತು. ಅನಂತರದ ಶತಮಾನಗಳಲ್ಲಿ ರಚಿತವಾದ ಚಂಪೂ ಕಾವ್ಯಗಳಲ್ಲಿ ಮಾತಿನ ಆಡಂಬರ ಮತ್ತು ಕೃತಕತೆಗಳು ಕೊಂಚ ಜಾಸ್ತಿ. ಗಮಕ ಸಂಪ್ರದಾಯವು ನಿಧಾನವಾಗಿ ಕಣ್ಮರೆಯಾಗುತ್ತಿರುವುದು ಮತ್ತು ನಮ್ಮ ಶಿಕ್ಷಣಕ್ರಮದಲ್ಲಿ ಕಾಣಿಸಿಕೊಂಡಿರುವ ಬದಲಾವಣೆ/ಕೊರತೆಗಳೂ ಈ ಪರಿಸ್ಥಿತಿಗೆ ಕಾರಣ. ಏನೇ ಆದರೂ ಪ್ರಾಚೀನ ಕನ್ನಡ ಕಾವ್ಯಗಳನ್ನು ಸರಿಯಾಗಿ ಗ್ರಹಿಸಲು, ಅಭ್ಯಾಸಮಾಡಲು ಈ ವೃತ್ತಗಳನ್ನು ಓದುವ ಬಗೆಯನ್ನು ಕುರಿತ ತಿಳಿವಳಿಕೆಯು ಅತ್ಯಗತ್ಯ.

ಮುಖಪುಟ / ಸಾಹಿತ್ಯ